The Science Behind Nothing

ಶೂನ್ಯ ಎಂಬುದು ಏನೂ ಇಲ್ಲದ, ಪರಿಮಾಣರಹಿತದ ಪರಿಮಾಣ ಸೂಚಿ. ಏನೂ ಇಲ್ಲದ್ದನ್ನು ಸೂಚಿಸುವುದಾದರೂ ಏಕೆ ಬೇಕು ಎಂಬ ಸೋಜಿಗ ಮೊದಲಾಗುತ್ತದೆ. ಶೂನ್ಯ ಇಲ್ಲದೆ ಸ್ಥಾನ ಬೆಲೆ ಸೂಚಿಸಲಾಗದು. ಸೊನ್ನೆ ಶೂನ್ಯದ ತದ್ಭವ. ವ್ಯಾಕರಣ ರೀತ್ಯಾ ಸೊನ್ನೆ ಏಕವಚನ. ಆದರೆ ಸತ್ಯ ಅಷ್ಟು ಸರಳವಲ್ಲ. ಗಣಿತ ಕ್ಷೇತ್ರದಲ್ಲೇ ಅನೇಕ ಗೊಂದಲಗಳನ್ನು ಉಂಟು ಮಾಡಿದ್ದು ಈ ಶೂನ್ಯದ ವಿಶೇಷ. ಕೆಲವನ್ನು ನೋಡೋಣ. ಗಣಿತದಿಂದ ಪ್ರತಿಪಾದಿಸಿ ಸಾಧಿಸಿದಾಗ ಮಾತ್ರ ವಿಜ್ಞಾನ ಪರಿಪೂರ್ಣ ಎಂದು ಡವಿಂಚಿ ಪ್ರತಿಪಾದಿಸಿದ್ದುಂಟು. ಗಣಿತದಲ್ಲೇ ಗೊಂದಲ ಎಬ್ಬಿಸಿರುವ ಶೂನ್ಯ ವಿಜ್ಞಾನದಲ್ಲೂ ಬಿರುಗಾಳಿ ಎಬ್ಬಿಸಿರುವುದು ಸಹಜ ಹಾಗೂ ನಿರೀಕ್ಷಿತ. ಏನೂ ಇಲ್ಲದೆ ಇರುವ ಸ್ಥಿತಿಯೇ ಶೂನ್ಯ ಎಂದರೆ, ಏನೂ ಇಲ್ಲದ್ದು ಇರುವುದು ಹೇಗೆ?
ರಸಾಯನ ಶಾಸ್ತçದವರ ಸ್ಥೂಲ ದೃಷ್ಟಿಗೆ ಪರಮಾಣುಗಳು ಇಲ್ಲದ ಸ್ಥಿತಿ ಎನಿಸಿದರೂ, ಪರಮಾಣುವಿನ ಒಳಗೂ, ಹೊರಗೂ ಶೂನ್ಯವಿಲ್ಲವೆ? ಭೌತಶಾಸ್ತçದ್ದು ಇನ್ನೊಂದು ಗೋಜಲು, ಶೂನ್ಯದಲ್ಲಿ ಕ್ಷೇತ್ರ ಇರಬಹುದೇ? ದ್ರವ್ಯವೆಂದರೆ ಕ್ಷೇತ್ರ ಶಕ್ತಿಯ ಮೂರ್ತ ರೂಪ. ಶೂನ್ಯದಿಂದ ಸಮಪ್ರಮಾಣದಲ್ಲಿ ಧನ/ಋಣ ಸಂಖ್ಯೆ ರೂಪುಗೊಂಡ ಹಾಗೆ ದ್ರವ್ಯ-ಪ್ರತಿದ್ರವ್ಯ ಸಮನಾಗಿ ರೂಪುಗೊಂಡಿರಬಹುದೇ? ಪ್ರತಿದ್ರವ್ಯ ವಿಶ್ವ ಎಲ್ಲಿ? ಈ ಗೊಂದಲ ಮುಗಿಯದ ಕಗ್ಗಂಟು ಎನಿಸಿ ಶೂನ್ಯದ ಸುದ್ದಿಯೇ ಬೇಡ ಎನ್ನಲೂ ಬರದು. ಮಹರ್ಷಿ ಕಣಾದ ಹಾಗೂ ಡಿಮಾಕ್ರಿಟಸ್ ಇಬ್ಬರೂ ವಿಶ್ವವನ್ನು ಕಣ ಹಾಗೂ ಶೂನ್ಯ ಎಂದೇ ಬಣ್ಣಿಸಿದರು. ಕೇವಲ ಕಣಭರಿತ ಜಗತ್ತಾದರೆ ಕಣ ಚಲನೆ ಅಸಾಧ್ಯ! ನಿರ್ವಾತ ಸ್ಥಿತಿ ಕೇವಲ ಪ್ರಯೋಗ ಸೃಷ್ಟಿ ಅಲ್ಲ, ವಿಶ್ವದಲ್ಲೂ ತಂತಾನೆ ಇದೆ. ಈ ಮಾತುಗಳು ಪುಸ್ತಕ ಓದಲು ಹಸಿವೆಯ ಉದ್ದೀಪಕ(ಚಿಠಿಠಿeಣiseಡಿ) ಎನ್ನಬಹುದು.
ಈ ಕೃತಿಯ ನಿರೂಪಣೆಯಲ್ಲಿ ಅನೇಕ ಗುಣಾಂಶಗಳಿವೆ. ಶೂನ್ಯದ ಪರಿಕಲ್ಪನೆ ಪರಿವರ್ತನೆಯಾಗುತ್ತ ಸಾಗುವಾಗ, ಹಿಂದಿನ ಪರಿಕಲ್ಪನೆಯನ್ನು ಕೈಬಿಡುವ, ಹೊಸ ಪರಿಕಲ್ಪನೆಗೆ ಕೈಚಾಚುವ ಸಾಹಸ ಅನಿವಾರ್ಯ. ಆ ಸತ್ಯ ಸಂಕ್ರಮಣದ ಪ್ರಸವವೇದನೆ ವಿಜ್ಞಾನ ಪಠ್ಯಪುಸ್ತಕ ಓದುವವರ ಅರಿವಿಗೆ ಬರುವದಿಲ್ಲ. ಈ ಪರಿವರ್ತನೆಯ ಹರಿಕಾರರನೇಕ. ಅವರಲ್ಲಿ ಪರಸ್ಪರ ಪೈಪೋಟಿ -ರಾಗದ್ವೇಷಗಳು ಹಾಗೂ ಪ್ರಯೋಗ ಫಲಿತಾಂಶವನ್ನು ಅರ್ಥೈಸುವ ಪರಿ- ಬೇರೆ ಬೇರೆ ಆಗಿರುವುದುಂಟು. ಈ ಸ್ಥಿತ್ಯಂತರಗಳನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಸತ್ಯ ನಿಷ್ಠೆಯಿಂದ ಬರೆಯುವದು ಕಠಿಣ. ಈ ಪ್ರಯತ್ನದಲ್ಲಿ –ವಿಜ್ಞಾನಿಗಳ ಬಗೆಗೆ ಯಾವುದೇ ಪೂರ್ವಗ್ರಹವಿಲ್ಲದ ಹಾಗೆ, ಅವರ ಗುಣ ದೋಷಗಳು, ಅದಕ್ಕೆ ಕಾರಣಗಳು, ಸಂದರ್ಭ, ಪ್ರಯೋಗಗಳ ಫಲಿತಾಂಶದ ಒತ್ತಡಗಳನ್ನು ಮಾನವ ಸಹಜವಾಗಿ ಎದುರಿಸಿದ ಪರಿಯನ್ನು ಲೇಖಕರು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ. ಯಾವುದೇ ಆವೇಶ, ಪೂರ್ವಗ್ರಹ ಮೂಡದ ಹಾಗೆ ಯಥಾರ್ಥ ಚಿತ್ರಣ ಮಾಡುವ ಸಂಯಮವನ್ನು ಅನನ್ಯವಾಗಿ ತೋರಿದ್ದಾರೆ. ಪಠ್ಯಕಲಿಕೆಯ ವಿಜ್ಞಾನದ ಕೊರತೆಯನ್ನು ನೀಗುವ ಈ ಪ್ರಯತ್ನದಲ್ಲಿ ಶೂನ್ಯಾನ್ವೇಷಣೆಯ ಸಾಹಸಗಾಥೆಯ ಪಾತ್ರಗಳಿಗೆ, ಸತ್ಯಗಳಿಗೆ ಅಪಚಾರವೆಸಗದೆ ಅತ್ಯಂತ ಸಂಯಮದ ಬರವಣಿಗೆ ಮಾಡಿರುವುದು ಈ ಕೃತಿಯ ವಿಶೇಷಗಳಲ್ಲಿ ಒಂದು ಮಾತ್ರ. ಇನ್ನೂ ಅನೇಕ ಇಂತಹ ಬೆರಗುಗಳಿಗೆ ಕೃತಿಯನ್ನು ನಿಧಾನವಾಗಿ ಓದಬೇಕು.

ಒಟ್ಟಿನಲ್ಲಿ ಪೂರ್ಣದ ಅರಿವು ಇಲ್ಲದೆ ವಿಶ್ವಚಿತ್ರಣ ಅಪೂರ್ಣ. ಇಂತಹ ರೋಚಕ ವಿಷಯ ನಿರೂಪಣೆಯಲ್ಲಿ ಕೌತುಕ ಶೂನ್ಯ ಆಗದಂತೆ ಲೇಖಕರು ಪರಿಶ್ರಮಿಸಿ, ಆನಂದಿಸಿ, ಓದುಗರಿಗೆಲ್ಲ ಆನಂದ ನೀಡಿದ್ದಾರೆ. ಇಂತಹ ಹಲವಾರು ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಸೇರ್ಪಡೆ ಆಗಲು ಅವರಿಗೆ ಹಾಗೂ ಎಲ್ಲ ಲೇಖಕ/ಓದುಗರಿಗೆ ಈ ಕೃತಿ ಸ್ಫೂರ್ತಿ ನೀಡಲಿ.
ಬಯಲು ಎಂಬುವದು ಶೂನ್ಯ, ಅಂದರೆ ಏನೂ ಇಲ್ಲದ ಒಂದು ಸ್ಥಿತಿ. ಹಾಗೂ ಆ ಏನೂ ಇಲ್ಲದಿರುವಿಕೆಯಿಂದಲೇ ಎಲ್ಲವೂ ಪ್ರಕಟವಾಗಿ ಕೊನೆಗೊಮ್ಮೆ ಆ ಎಲ್ಲವೂ ಏನೂ ಇಲ್ಲದಾಗುವಂತಹ ಸ್ಥಿತಿ. ಅಂದರೆ, ನಮ್ಮ ಇಡೀ ಜಗತ್ತು, ಎಲ್ಲ ಅಸ್ತಿತ್ವ, ಜೀವನ, ಭಾವನೆ ಹಾಗೂ ಪ್ರಕಟಿತವಾಗಿದ್ದ ಎಲ್ಲವೂ ಶೂನ್ಯದಿಂದ ಮೂಡಿಬಂದು ಶೂನ್ಯದಲ್ಲೇ ಸಮಾಪ್ತಿಯಾಗುವುದೆಂದೇ ಹೇಳಲಾಗಿದೆ. ಆಧುನಿಕ ವಿಶ್ವಶಾಸ್ತçದ ಹಾಗೂ ಭೌತವಿಜ್ಞಾನದ ಇತ್ತೀಚಿನ ಸಂಶೋಧನೆಗಳೂ ಕೂಡ ವಿಶ್ವವು ಶೂನ್ಯದಿಂದ ಉಗಮವಾಗಿದೆ ಎನ್ನುವ ಹಂತಕ್ಕೆ ಬಂದು ತಲುಪಿವೆ.
ಬಯಲಿನ ಗುಣಗಳು, ವಿಜ್ಞಾನ-ಜಗತ್ತಿಗೆ ತಿಳಿದಿರುವ ಯಾವುದೇ ವಸ್ತುವಿನ ಗುಣಗಳಿಗಿಂತ ಹೆಚ್ಚು ಶಕ್ತಿಯುತವಾಗಿವೆ. ಎಷ್ಟೋ ವಿವಿಧ ರೀತಿಯ ಬಲಕ್ಷೇತ್ರಗಳು, ತರಂಗಗಳು, ಮಿಥ್ಯಕಣಗಳು ಹಾಗೂ ಇನ್ನೂ ಏನೇನನ್ನೋ ಈ ಬಯಲು ಒಳಗೊಂಡಿದೆ. ಅದರ ಬಗ್ಗೆ ತಿಳಿದಷ್ಟೂ ಅದು ಹೆಚ್ಚು-ಹೆಚ್ಚು ಸಂಕೀರ್ಣವಾಗುತ್ತ ಹೋಗುತ್ತಿದೆ. ಅಂದರೆ, ತಿಳಿದುಕೊಳ್ಳುವುದು ಇನ್ನೂ ಎಷ್ಟೋ ಇದೆ ಎಂಬ ಅರಿವು ಉಂಟಾಗುತ್ತಲೇ ಹೋಗುತ್ತದೆ. ಈ ನಿಟ್ಟಿನಲ್ಲಿ ವಿಚಾರಿಸಿದಾಗ, ಏನೂ ಇಲ್ಲದಿರುವಿಕೆ(ಓoಣhiಟಿgಟಿess)ಯ ಸ್ಥಿತಿ ನಿಜವಾಗಲೂ ಖಾಲಿ ಇಲ್ಲವೇ ಇಲ್ಲ, ಅಲ್ಲಿ ಏನೋ ಒಂದು ತುಂಬಿದೆ ಎಂಬ ಭಾವನೆ ಎಲ್ಲರಿಗೂ ಬರತೊಡಗುತ್ತದೆ. ಅದಕ್ಕಾಗಿಯೇ ಈ ಪುಸ್ತಕಕ್ಕೆ ‘ಏನೂ ಅಲ್ಲದ ಏನೋ ಒಂದು’ ಎಂದೂ ಕರೆಯಬಹುದು.