ಖಗೋಳ ವಿಜ್ಞಾನವನ್ನು ಎಲ್ಲ ವಿಜ್ಞಾನಗಳ ತಾಯಿ ಎಂದೇ ಹೇಳುತ್ತರಾದರೂ, ಎಲ್ಲರೂ ಇದೊಂದು ಕಠಿಣವಾದ ವಿಷಯವೆಂದೂ, ತಮ್ಮಿಂದ ಅದನ್ನು ಕಲಿಯಲಾಗುವದಿಲ್ಲೆಂದೂ ಹೇಳಿ ಅದರಿಂದ ದೂರ ಸರಿಯುವದುಂಟು. ಆದರೆ, ಪ್ರತಿ ರಾತ್ರಿಯೂ ಮಿನುಗುವ ನಕ್ಷತ್ರಗಳ ಚಿತ್ತಾರದಿಂದ ತಪ್ಪಿಸಿಕೊಳ್ಳುವುದು ಯಾರಿಂದಲೂ ಆಗುವದಿಲ್ಲ. ಮಹಾನಗರಗಳನ್ನು ಹೊರತುಪಡಿಸಿದರೆ, ಉಳಿದೆಲ್ಲ ಜನರು ಒಂದಲ್ಲ ಒಂದು ರೀತಿಯಲ್ಲಿ ನಕ್ಷತ್ರಗಳ ಸೆಳೆತದಲ್ಲಿ ಬಂದೇ ಬಂದಿರುತ್ತಾರೆ. ಇದಲ್ಲದೆ ಎಲ್ಲರೂ ತಮ್ಮ ಜನ್ಮ ಕುಂಡಲಿಗಳಿAದಾಗಲಿ, ಶಾಲೆಗಳಲ್ಲಿ ಓದುವ ದಿನ ಪಂಚಾAಗಗಳಿAದಾಗಲಿ, ಆಗಾಗ್ಗೆ ಕೇಳಿಬರುವ ಗ್ರಹಣಗಳಿಂದಾಗಲಿ, ಧೂಮಕೇತುಗಳಿಂದಾಗಲಿ, ಗ್ರಹಶಕುನಗಳಿಂದಾಗಲೀ ಗ್ರಹ-ನಕ್ಷತ್ರಗಳ ವಿಷಯ ಕೇಳಿಯೇ ಇರುತ್ತಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಅಲ್ಪ-ಸ್ವಲ್ಪ ಖಗೋಳಜ್ಞಾನದ ಅವಶ್ಯಕತೆ ಇದ್ದೇ ಇದೆ. ಖಗೋಳಜ್ಞಾನದ ಮೂಲ ಪರಿಕಲ್ಪನೆಗಳು ಕಬ್ಬಿಣದ ಕಡಲೆಗಳಾಗಿ, ಅವುಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಯಾರೂ ಹೋಗುವುದಿಲ್ಲ ಆದರೆ ಸ್ವಲ್ಪವೇ ಆಸಕ್ತಿ ತೋರಿಸಿದರೆ, ಯಾರೂ ಕೂಡಾ ಅದರ ಮೂಲಭೂತ ತತ್ವಗಳನ್ನು ಅರಿಯಬಲ್ಲರು. ಶಾಲೆಗಳಲ್ಲಿ ಓದುವ - ಭೂಮಿಯು ಸೂರ್ಯನ ಸುತ್ತ ಸುತ್ತುವ ವಿಷಯ, ಚಂದ್ರನು ಭೂಮಿಯ ಸುತ್ತ ಸುತ್ತುವ ವಿಷಯ, ಗ್ರಹಣಗಳು, ನಕ್ಷತ್ರಗಳು, ರಾಶಿಗಳು, ಅಯನಗಳು, ಪಕ್ಷಗಳು, ಮಾಸಗಳು ಮುಂತಾದವುಗಳು ಸ್ವಂತ ಅನುಭವಕ್ಕೆ ಬರುವದಕ್ಕೆ ನಕ್ಷತ್ರ ವೀಕ್ಷಣೆ ಅಗತ್ಯ. ಇದರಿಂದ ಜನಸಾಮಾನ್ಯರಿಗೆ ವಿಶ್ವದ ಅಗಾಧತೆಯ ಅರಿವು ಉಂಟಾಗಿ ಮನುಷ್ಯನ ಕ್ಷಿತಿಜವೇ ವಿಸ್ತಾರವಾಗುತ್ತದೆ.
ಈ ಪುಟ್ಟ ಹೊತ್ತಿಗೆಯಲ್ಲಿ ನಕ್ಷತ್ರ ವೀಕ್ಷಣೆಯ ಮೂಲತತ್ವಗಳನ್ನು, ನಕ್ಷತ್ರವೀಕ್ಷಣೆ ನಿತ್ಯಜೀವನದಲ್ಲಿ ಹೇಗೆ ಉಪಯುಕ್ತವಾಗುತ್ತದೆ ಎಂಬುದನ್ನು, ನಕ್ಷತ್ರ-ನಕ್ಷೆಗಳನ್ನು ಹೇಗೆ ಓದಬೇಕು, ಮುಂತಾದ ವಿಷಯಗಳನ್ನು ಪ್ರಶ್ನೋತ್ತರ ರೂಪದಲ್ಲಿ ಉದಾಹರಣೆಗಳೊಂದಿಗೆ ವಿವರಿಸಲಾಗುವುದು. ಇಲ್ಲಿ ಅತ್ಯಂತ ಸರಳ ಹಾಗೂ ಮೂಲಭೂತ ಪರಿಕಲ್ಪನೆಗಳನ್ನು ಮೊದಲು ಕೊಡಲಾಗಿದೆ. ವಿಷಯದ ಆಳ ಮುಂದೆ ಮುಂದೆ ಹೋದಂತೆ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ಇಲ್ಲಿ ಮೊದಲಿನ ಪ್ರಶ್ನೋತ್ತರ ಮೊದಲು ಹಾಗೂ ನಂತರದ ಪ್ರಶ್ನೋತ್ತರ ನಂತರ ಹೀಗೆ ಓದುತ್ತ ಹೋದರೆ ಹೆಚ್ಚು ಉಪಯುಕ್ತವಾಗುತ್ತದೆ. ಇದನ್ನು ಒಂದು ಸ್ವಯಂ-ಅಧ್ಯಯನ (ಸೆಲ್ಫ್ ಸ್ಟಡಿ) ಪುಸ್ತಕವೆಂದು ಹೇಳಬಹುದು. ಇಲ್ಲಿ ಕೆಳಗಿನಂತಹ ಹಲವಾರು ಪ್ರಶ್ನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ.
ಭೂಮಿಯು ಗೋಳಾಕಾರವಾಗಿದ್ದ ಮತ್ತು ಅದು ತನ್ನ ಅಕ್ಷದ ಸುತ್ತಲೂ ನಿರಂತರವಾಗಿ ಸುತ್ತುತ್ತಿದ್ದರೂ ಅದರ ಚಲನೆ ನಮಗೆ ಕಾಣುವುದಿಲ್ಲ ಅಥವಾ ಅನುಭವವಾಗುವುದಿಲ್ಲ ಏಕೆ? ನಕ್ಷತ್ರ ವೀಕ್ಷಣೆಯನ್ನು ಹೇಗೆ ಪ್ರಾರಂಭಿಸಬೇಕು? ಅದಕ್ಕಾವ ತಯಾರಿ ಬೇಕು? ಅದು ನಮ್ಮ ನಿತ್ಯ ಜೀವನದಲ್ಲಿ ಹೇಗೆ ಉಪಯೋಗವಾಗುತ್ತದೆ? ನಮ್ಮ ಬರಿಗಣ್ಣಿಗೆ ಎಷ್ಟು ನಕ್ಷತ್ರಗಳು ಕಾಣಿಸುತ್ತವೆ? ನಕ್ಷತ್ರ ವೀಕ್ಷಣೆಯನ್ನು ವರ್ಷದ ಯಾವ ದಿನಗಳಲ್ಲಿ ಮಾಡುವದೊಳ್ಳೆಯದು? ಆಕಾಶ ವೀಕ್ಷಣೆಗೆ ಅಂದರೆ ನಕ್ಷತ್ರ ವೀಕ್ಷಣೆಯನ್ನು ಒಂದು ಹವ್ಯಾಸವನ್ನಾಗಿ ಬೆಳೆಸಿಕೊಳ್ಳಲು ಟೆಲಿಸ್ಕೋಪಿನ ಅವಶ್ಯಕತೆ ಇದೆಯಾ? ದೂರದರ್ಶಕದಿಂದ ನಕ್ಷತ್ರಗಳನ್ನು ದೊಡ್ಡದಾಗಿ ಮಾಡಿ ನೋಡಬಹುದೆ? ಆಕಾಶ ವೀಕ್ಷಣೆಗೆ ಸಹಾಯ ಮಾಡುವ ಆಧುನಿಕ ಸಾಧನಗಳಾವವು? ಹುಣ್ಣಿಮೆ ಮತ್ತು ಅಮಾವಾಸ್ಯೆಗಳು ಹೇಗೆ ಉಂಟಾಗುತ್ತವೆ?
ರಾಶಿ ಚಕ್ರ ಎಂದರೇನು? ಅದರಲ್ಲಿ ಎಷ್ಟು ನಕ್ಷತ್ರ ಪುಂಜಗಳಿವೆ? ಈ ವರೆಗೆ ಗುರುತಿಸಿದ ನಕ್ಷತ್ರ ಪುಂಜಗಳೆಷ್ಟು? ರಾಶಿ ಚಕ್ರದಲ್ಲಿ ಎಷ್ಟು ನಕ್ಷತ್ರಗಳಿವೆ? ಜನ್ಮ-ನಕ್ಷತ್ರ ಎಂದರೇನು? ವಾರದ ಏಳು ದಿನಗಳಿಗೆ ಹಾಗೂ ಖಗೋಳವಿಜ್ಞಾನಕ್ಕೆ ಏನು ಸಂಬAಧವಿದೆ? ಧೃವ-ನಕ್ಷತ್ರವನ್ನು ಹೇಗೆ ಗುರುತಿಸಬಹುದು? ಉತ್ತರಾಯಣ
ಹಾಗೂ ದಕ್ಷಿಣಾಯಣ ಎಂದರೇನು? ಗ್ರಹಣಗಳು ಹೇಗೆ ಉಂಟಾಗುತ್ತವೆ? ಖಂಡಗ್ರಹಣ ಹಾಗೂ ಖಗ್ರಾಸ ಗ್ರಹಣ ಎಂದರೇನು? ಪೂರ್ಣ ಸೂರ್ಯಗ್ರಹಣದ ವೈಶಿಷ್ಟö್ಯವೇನು? ಕೃಷ್ಣ ರಂಧ್ರ(ಬ್ಲಾö್ಯಕ್ ಹೋಲ್)ವನ್ನು ನೋಡಬಹುದೇ? ವರ್ಮ ಹೋಲ್ ಎಂದರೇನು? ವಿಶ್ವದ ಮತ್ತು ಸೌರಮಂಡಲದ ಆಯಸ್ಸನ್ನು ಹೇಗೆ ನಿರ್ಧರಿಸಿದ್ದಾರೆ? ಮುಂತಾದ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.